Crime News

ಮಾದಕ ವಸ್ತು ಮಾರಾಟ ಪ್ರಕರಣ

ಕೊಡಗು ಜಿಲ್ಲೆಯಲ್ಲಿ ನಶೆಯೇರುವ ಮಾತ್ರೆಗಳನ್ನು ಮೆಡಿಕಲ್ ಶಾಪ್ ಮಾಲೀಕರ ಶಾಮೀಲಿನೊಂದಿಗೆ ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು  ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಅಧಿಕಾರಿ ಹಾಗೂ ಸಿಬ್ದಂದಿಗಳು ಯಶಸ್ವಿಯಾಗಿದ್ದಾರೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ  ಗಾಂಜಾ , ಡ್ರಗ್ಸ್ ಮತ್ತಿತರ  ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆ ನಿಯಂತ್ರಣಕ್ಕೆ ಬಂದ ಹಿನ್ನಲೆಯಲ್ಲಿ ಮಾದಕ ವ್ಯಸನಿಗಳಾಗಿದ್ದ ಯುವಕರು  ನಶೆಯೇರುವ ಮಾತ್ರೆಗಳನ್ನು ಮೆಡಿಕಲ್ ಶಾಪ್ ಗಳಿಂದ ಖರೀದಿಸಿ ಬಳಕೆ ಮಾಡುತ್ತಿರುವುದಲ್ಲದೇ  ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನಲೆ ಕೊಡಗು ಜಿಲ್ಲೆ ಡಿಸಿಐಬಿ ಘಟಕದ ಪೊಲೀಸರು  ಮಾಹಿತಿ  ಮೇರೆ ದಿನಾಂಕ 23-10-2020 ರಂದು ಗೋಣಿಕೊಪ್ಪಲಿನ ಮೆಡಿಕಲ್ ಶಾಪ್ ವೊಂದರಿಂದ ನಶೆಯೇರುವ ಮಾತ್ರೆಗಳನ್ನು ಖರೀದಿಸಿ  ಮಾರಾಟಕ್ಕೆ ಯತ್ನಿಸುತ್ತಿದ್ದ ಗೋಣಿಕೊಪ್ಪದ ಎಫ್‌.ಎಂ.ಸಿ. ರಸ್ತೆ ನಿವಾಸಿ ಹೆಚ್‌.ಆರ್.‌ ಸುಮನ್‌ ಮತ್ತು ಗೋಣಿಕೊಪ್ಪದ ಈರಣ್ಣ ಕಾಲೋನಿ ನಿವಾಸಿ ಜೀವನ್‌ ಹೆಚ್‌ ಎಸ್‌ ಎಂಬ ಇಬ್ಬರು ಯುವಕರನ್ನು  ನಶೆಯೇರುವ ಮಾತ್ರೆಗಳ ಬಾಕ್ಸ್ ಸಮೇತ ಪತ್ತೆಹಚ್ಚಿರುತ್ತಾರೆ. ಇದರಿಂದ ಜಿಲ್ಲೆಯಲ್ಲಿರುವ ಕೆಲ ಮೆಡಿಕಲ್ ಶಾಪ್ ನ ಮಾಲೀಕರು ನಶೆಯೆರುವ ಮಾತ್ರೆಗಳನ್ನು ಗೌಪ್ಯವಾಗಿ ಮಾದಕ ವ್ಯಸನಿಗಳಾಗಿರುವ ಕೆಲ ಯುವಕರ ಮುಖಾಂತರ ಮಾರಾಟ ಮಾಡಿಸಿ ಲಾಭ ಪಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ. ವಶಕ್ಕೆ ಪಡೆದ ಯುವಕರಿಬ್ಬರನ್ನು ವಶಕ್ಕೆ ಪಡೆದುಕೊಂಡ ಮಾತ್ರೆಗಳೊಂದಿಗೆ ಜಿಲ್ಲಾ ಡ್ರಗ್ ಕಂಟ್ರೋಲರ್ ಅಧಿಕಾರಿಯವರ ಮುಂದೆ ಹಾಜರುಪಡಿಸಲಾಗಿದ್ದು ಯುವಕರಿಬ್ಬರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗಿರುತ್ತದೆ.

 

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಡಿಸಿಐಬಿ ಇನ್ಸ್ ಪೆಕ್ಟರ್ ಎನ್.ಕುಮಾರ್ ಆರಾಧ್ಯ , ಪಿಎಸ್ಐ  ಹೆಚ್.ವಿ ಚಂದ್ರಶೇಖರ್  ಸಿಬ್ಬಂದಿಗಳಾದ ಎಎಸ್ಐ ಹಮೀದ್, ಯೊಗೇಶ್ ಕುಮಾರ್, ನಿರಂಜನ್, ವಸಂತ, ಶರತ್ ರೈ, ವೆಂಕಟೇಶ್, ಸುರೇಶ್, ಅನಿಲ್ ಕುಮಾರ್ ಹಾಗೂ ಶಶಿಕುಮಾರ್  ರವರು ಭಾಗವಹಿಸಿದ್ದು, ಇವರ ಕಾರ್ಯವೈಖರಿಯನ್ನು  ಶ್ಲಾಘಿಸಲಾಗಿದೆ.

 

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತು ನಿಯಂತ್ರಣಕ್ಕೆ ಬಂದ ಹಿನ್ನಲೆ ನಶೆಯೇರುವ ಮಾತ್ರೆಗಳ ಬಳಕೆಯತ್ತ ಯುವಕರು ಮುಂದಾಗಿರುವ ಬಗ್ಗೆ ಮಾಹಿತಿಗಳು ಬರುತ್ತಿರುವುದರಿಂದ ಮೆಡಿಕಲ್ ಶಾಪ್ ಗಳ ಮಾಲೀಕರು ನಿಗಾವಹಿಸುವಂತೆ ಕೋರಲಾಗಿದೆ. ಅಲ್ಲದೇ ಈ ಬಗ್ಗೆ ಪೋಷಕರು ಸಹಾ ತಮ್ಮ ಯುವ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾವಹಿಸಿ ಮಾದಕ ವ್ಯಸನಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.

ಅಕ್ರಮ ಗಾಂಜಾ ಮಾರಾಟ ಪ್ರಕರಣ

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕ್ತಿಯೊಬ್ಬನನ್ನು  ಮಾಲು ಸಮೇತ ಪತ್ತೆಹಚ್ಚುವಲ್ಲಿ ಡಿಸಿಐಬಿ ಘಟಕದ ಅಧಿಕಾರಿ ಹಾಗೂ ಸಿಬ್ದಂದಿಗಳು ಯಶಸ್ವಿಯಾಗಿದ್ದಾರೆ.

ದಿನಾಂಕ 23-10-2020ರಂದು ಖಚಿತ ಮಾಹಿತಿ ಮೇರೆ ಚೆಟ್ಟಳ್ಳಿ ಕಂಡಕೆರೆ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೈಸೂರಿನ ಪಿರಿಯಾಪಟ್ಟಣದ ಮುತ್ತೂರು ಕಾಲೋನಿ ನಿವಾಸಿ ವೆಂಕಟಾಚಲ ಎಂಬಾತನನ್ನು ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು  ಪತ್ತೆಹಚ್ಚಿ 1 ಕೆ.ಜಿ ತೂಕದ ಸುಮಾರು 50 ಸಾವಿರ ರೂ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕ್ಷಮಾ ಮಿಶ್ರಾರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಬಿ ನಿರೀಕ್ಷಕರಾದ ಎನ್.ಕುಮಾರ್ ಆರಾಧ್ಯ, ಪಿಎಸ್ಐ ಹೆಚ್.ವಿ ಚಂದ್ರಶೇಖರ್  ಸಿಬ್ಬಂದಿಗಳಾದ ಎಎಸ್ಐ ಹಮೀದ್, ಯೊಗೇಶ್ ಕುಮಾರ್ , ನಿರಂಜನ್, ವಸಂತ, ಶರತ್ ರೈ, ವೆಂಕಟೇಶ್, ಸುರೇಶ್, ಅನಿಲ್ ಕುಮಾರ್ ಹಾಗೂ ಶಶಿಕುಮಾರ್ ಭಾಗವಹಿಸಿದ್ದು, ಇವರ ಕಾರ್ಯವೈಖರಿಯನ್ನು  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು  ಶ್ಲಾಘೀಸಿ ನಗದು ಬಹುಮಾನವನ್ನು ಘೊಷಿಸಿರುತ್ತಾರೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಸಾಗಾಟ ಮತ್ತು ಬಳಕೆಯ ಬಗ್ಗೆ  ಸಾಕಷ್ಟು ದೂರುಗಳು ಬರುತ್ತಿದ್ದು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗುಪ್ತವಾಗಿ ಮಾಹಿತಿ ನೀಡಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಪೊಲೀಸ್ ಅಧೀಕ್ಷಕರು ಮನವಿ ಮಾಡಿಕೊಂಡಿರುತ್ತಾರೆ.

 

ಕಳ್ಳತನ ಯತ್ನ ಪ್ರಕರಣ

ಮಡಿಕೇರಿ ಬಳಿಯ ಗಾಳಿಬೀಡು ಗ್ರಾಮದಲ್ಲಿರುವ ಜವಾಹರ್‌ ನವೋದಯ ವಿದ್ಯಾಲಯದ ಪ್ರಭಾರ ಪ್ರಾಂಶುಪಾಲ ಅರುಣ್‌ ಕುಮಾರ್‌ ತಿವಾರಿಯವರು ದಿನಾಂಕ 10/10/2020ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಹೋಗಿ ದಿನಾಂಕ 19/10/2020ರಂದು ಮರಳಿ ಬರುವಾಗ ವಿದ್ಯಾಲಯದ ಶಿವಾಲಿಕ್‌ ಬಾಲಕಿಯರ ಹಾಸ್ಟೆಲ್‌ನ ಒಳಗಡೆ ಕಳ್ಳತನದ ಯತ್ನ ನಡೆದಿರುವುದಾಗಿ ಹಾಸ್ಟೆಲ್‌ನ ಚೌಕಿದಾರನು ತಿಳಿಸಿದ್ದು ಅರುಣ್‌ ಕುಮಾರ್‌ ತಿವಾರಿಯವರು ಹಾಸ್ಟೆಲ್‌ ಒಳಗೆ ಹೋಗಿ ನೋಡಿದಾಗ ವಿದ್ಯಾರ್ಥಿಗಳ ಟ್ರಂಕ್‌ನ ಬೀಗಗಳನ್ನಿ ಯಾರೋ ಒಡೆದು ಕಳ್ಳತನಕ್ಕೆ ಯತ್ನಿಸಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಬೈಕ್‌ ಕಳವು

ಮಡಿಕೇರಿ ಬಳಿಯ ಕಳಕೇರಿ ನಿಡುಗಣೆ ಗ್ರಾಮದ ನಂದಿಮೊಟ್ಟೆ ನಿವಾಸಿ ಪಿ.ಡಿ.ನವೀನ್‌ ಎಂಬವರು ದಿನಾಂಕ 18/10/2020ರಂದು ಅವರ ಯಮಹಾ ಬೈಕನ್ನು ಅಬ್ಬಿಫಾಲ್ಸ್‌ ರಸ್ತೆಯ ಆರ್‌ಟಿಓ ಕಚೇರಿ ಮುಂಭಾಗದ ಕ್ಯಾಂಟೀನ್‌ ಮುಂದೆ ನಿಲ್ಲಿಸಿ ಮನೆಗೆ ಹೋಗಿದ್ದು, ಮಾರನೇ ದಿನ ಬಂದು ನೋಡಿದಾಗ ಬೈಕನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ಬಾಲಕಿ ಸಾವು

ದಿನಾಂಕ 23/10/2020ರಂದು ವಿರಾಜಪೇಟೆ ಬಳಿಯ ಅಮ್ಮತ್ತಿ ನಿವಾಸಿ ಜೇನುಕುರುಬರ ಚಂದ್ರ ಎಂಬವರ ಮಗಳು ಪ್ರಿಯಾ ಎಂಬ ಬಾಲಕಿಯು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಮೃತಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.