News

ಗಲಭೆ ನಿಯಂತ್ರಣ ಅಣಕು ಕಾರ್ಯಾಚರಣೆ

      ದಿನಾಂಕ 8-11-2019 ರಂದು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ  ಗಲಭೆ ನಿಯಂತ್ರಣದ ಬಗ್ಗೆ  ತರಬೇತಿ ಹಾಗು ಪೊಲೀಸ್ ಕಾರ್ಯಾಚರಣೆಯ ಅಣಕು ಪ್ರದರ್ಶನವನ್ನು ನಡೆಸಲಾಯಿತು. 

ಮುಂದಿನ ದಿನಗಳಲ್ಲಿ  ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು  ಕಾಪಾಡಲು ಮುಂಜಾಗೃತಾ ಕ್ರಮವಾಗಿ  ಕೊಡಗು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ  ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ  ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಪುನಶ್ಚೇತನ ತರಬೇತಿಯನ್ನು ಕಳೆದ ಮೂರು ದಿನಗಳಿಂದ ನಡೆಸಲಾಗುತ್ತಿದ್ದು  ಅಂತಿಮ ದಿನವಾದ ಇಂದು ತರಬೇತಿ ಹೊಂದಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ  ಗಲಭೆ ನಿಯಂತ್ರಣದ ಪೂರ್ಣ ಪೊಲೀಸ್ ಕಾರ್ಯಾಚರಣೆಯ  ಅಣಕು ಪ್ರದರ್ಶನವನ್ನು  ನಡೆಸಲಾಯಿತು.  

ಈ ಕಾರ್ಯಕ್ರಮವನ್ನು ಪೊಲೀಸ್ ವರಿಷ್ಠಾಧಿಕಾರಿರವರ ಮಾರ್ಗದರ್ಶನದಲ್ಲಿ, ಮಡಿಕೇರಿ ಡಿವೈಎಸ್‍ಪಿ ಹಾಗು ಡಿಎಆರ್‍ ಘಟಕದ ಆರ್‍ಪಿಐ ರವರ ನೇತೃತ್ವದಲ್ಲಿ ನಡೆಸಲಾಯಿತು.  ಕಾರ್ಯಕ್ರಮದಲ್ಲಿ  ಜಿಲ್ಲೆಯ ವಿವಿಧ ಠಾಣೆ ಹಾಗು ಜಿಲ್ಲಾ ಸಶಸ್ತ್ರದಳದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.  

ಕೊಲೆ ಆರೋಪಿಗಳಿಗೆ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ.

            ದಿನಾಂಕ 17-9-2014 ರಂದು ಸಮಯ 15-30 ಗಂಟೆಗೆ ವಿರಾಜಪೇಟೆ ನಗರದ ಸಂಗಂ ಹೊಟೇಲ್ ನಲ್ಲಿ ಚಾಮಿ ಯಾಲ ಗ್ರಾಮದ ಅನೀಶ್, ಮೂಸಾನ್ @ ಮೂಸ, ನಸೀರ್ @ ನಚ್ಚು, ಸೂಫಿ ಹಾಗೂ ಅಜ್ ಮುದ್ದಿನ್ @ ಅಸ್ಮು ರವರು  ಗುಂಪು ಸೇರಿಕೊಂಡು ಚಾಮಿಯಾಲದ ನಿವಾಸಿ 50 ವರ್ಷ ಪ್ರಾಯದ ಇಕ್ಬಾಲ್ ಹಸನ್ ರವರನ್ನು ಕೋವಿಯಿಂದ ಗುಂಡು ಹಾರಿಸಿ ಕೊಲೆಗೈದಿದ್ದು, ಆ ಸಮಯದಲ್ಲಿ ಹೊಟೇಲ್ ಒಳಗಡೆ ಊಟ ಮಾಡುತ್ತಿದ್ದ ಶಿವಕೇರಿಯ ನಿವಾಸಿ ಚಂದ್ರಶೇಖರ್ ಎಂಬುವವರ ಕಾಲಿಗೂ  ಸಹ ಗುಂಡೇಟು ತಾಗಿ ಗಾಯವಾಗಿರುವುದಾಗಿ ಮೃತನ ಪತ್ನಿ ಶ್ರೀಮತಿ ರೆಹಮತ್ ರವರು ಕೊಟ್ಟ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 119/2014 ಕಲಂ. 302, 324, ರೆ/ವಿ 34 ಐ.ಪಿ.ಸಿ. ಮತ್ತು 3 & 25 ಇಂಡಿಯನ್  ಆರ್ಮ್ಸ್ ಆಕ್ಟ್  ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು  ತನಿಖೆ ಪೂರೈಸಿ ಆರೋಪಿಗಳಾದ ಅನೀಶ್, ಮೂಸಾನ್ @ ಮೂಸ, ನಸೀರ್ @ ನಚ್ಚು, ಅಜ್ ಮುದ್ದಿನ್ @ ಅಸ್ಮು ಹಾಗೂ ಅನಿಶ್ ಗೆ ಬಂದೂಕು ನೀಡಿದ್ದ ಚಾಮಿಯಾಲದ ನಿವಾಸಿ ಉಸ್ಮಾನ್ ಇವರುಗಳ ವಿರುದ್ದ ದೊಷಾರೋಪಣ ಪತ್ರವನ್ನು ತಯಾರಿಸಿ ಗೌರವಾನ್ವಿತ ವಿರಾಜ ಪೇಟೆಯ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊಡಗು ಜಿಲ್ಲೆರವರ ಸಲ್ಲಿಸಲಾಗಿತ್ತು. ಘನ ನ್ಯಾಯಾಲಯದಲ್ಲಿ ಎಸ್.ಸಿ.ನಂಬರ್ 38/2015 ರಲ್ಲಿ ವಿಚಾರಣೆ ನಡೆದು ಘನ ನ್ಯಾಯಾಲಯವು ಆರೋಪಿಗಳಾದ

 1). ಕುವಲೆರ. ಯು. ಅನೀಶ್ ತಂದೆ ಕೆ.ಎ ಉಸ್ಮಾನ್, ಪ್ರಾಯ 29 ವರ್ಷ, ವ್ಯಾಪಾರ ವೃತ್ತಿ, ವಾಸ ಚಾಮಿಯಾಲ, ಮೈತಾಡಿ ಗ್ರಾಮ.

2). ಕುವಲೆರ. ಎ. ಮೂಸನ್ @ ಮೂಸ ತಂದೆ ಪೌತಿ ಅಹಮ್ಮದ್, ಪ್ರಾಯ 46 ವರ್ಷ, ವ್ಯವಸಾಯ ವೃತ್ತಿ, ಚಾಮಿಯಾಲ, ಮೈತಾಡಿ ಗ್ರಾಮ

3). ಪುದಿಯಾಣೆ. ಎಂ. ನಜೀರ್ @ ನಚ್ಚು, ತಂದೆ ಪೌತಿ ಪಿ.ಎ. ಮೊಯ್ದಿನ್, ಪ್ರಾಯ 36 ವರ್ಷ, ವ್ಯವಸಾಯ ವೃತ್ತಿ, ವಾಸ ಅಂಗನವಾಡಿ ಎದುರಗಡೆ, ಚಾಮಿಯಾಲ ಮೈತಾಡಿ ಗ್ರಾಮ, ದೇವಣಗೇರಿ ಅಂಚೆ.

4) ಅಜ್ ಮುದ್ದಿನ್ @ ಅಸ್ಮು ತಂದೆ ಹಂಸ, ವಾಸ ಚಾಮಿಯಾಲ, ಮೈತಾಡಿ ಗ್ರಾಮ(ಆರೋಪ ಮುಕ್ತ ರಾಗಿರುತ್ತಾರೆ)

5)ಕುವಲೇರ .ಎ.ಉಸ್ಮಾನ್ ತಂದೆ ಆಹಮದ್, ಪ್ರಾಯ 59 ವರ್ಷ,ಚಾಮಿಯಾಲ, ಮೈತಾಡಿ ಗ್ರಾಮ ಇವರುಗಳಿಗೆ ಘನ ನ್ಯಾಯಾಲಯವು ಈ ದಿನ ದಿನಾಂಕ 08-11-2019 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಆರೋಪಿಗಳಾದ 1 ರಿಂದ 3 ರವರುಗಳಿಗೆ ಕಲಂ: 302 ಐ.ಪಿ.ಸಿ.ಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 50,000/- ರೂ ದಂಡ ಹಾಗೂ ಆರೋಪಿ 1 ರವರಿಗೆ ಕಲಂ:324 ಐ.ಪಿ.ಸಿ.ಗೆ 3 ವರ್ಷ ಸಜೆ ಹಾಗೂ 5,000/=- ರೂ ದಂಡ ಹಾಗೂ A1 ರವರಿಗೆ ಶಸ್ತ್ರಾಸ್ತ್ರ ಕಾಯ್ದೆ ಅಡಿ 3 ವರ್ಷ ಶಿಕ್ಷೆ ಹಾಗೂ 5,000/- ರೂ ದಂಡ ಮತ್ತು  ಆರೋಪಿ 5 ರವರಿಗೆ ಕಲಂ: 30 Arms Act ಅಡಿಯಲ್ಲಿ 5,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.  4ನೇ ಆರೋಪಿಯು ಆರೋಪ ಮುಕ್ತರಾಗಿರುತ್ತಾರೆ.

         ಈ ಪ್ರಕರಣವನ್ನು ಅಂದಿನ ತನಿಖಾಧಿಕಾರಿ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಆರ್.ಪ್ರಸಾದ್ ರವರು ತನಿಖೆ ನಡೆಸಿ ನ್ಯಾಯಾ ಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಸರ್ಕಾರಿ ಅಭಿಯೋಜಕರಾದ ಶ್ರೀ. ನಾರಾಯಣರವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.

Crime News

ನಕಲಿ ಆರ್.ಸಿ ಕಾರ್ಡ್ ಸೃಷ್ಠಿಸಿ ವಂಚನೆ

            ಮಡಿಕೇರಿ ತಾಲ್ಲೂಕು ಹೊದವಾಡ ಗ್ರಾಮದ ಬಿ.ಸಿ ಕುಶಾಲಪ್ಪ ಎಂಬುವವರು ಖರೀದಿಸಿದ ಟಿವಿಎಸ್ ಅಪಾಚಿ ಬೈಕ್ ಗೆ ಯಾರೋ ಕೆಎ-12-ಯು-9999 ಎಂಬ ನೋಂದಣಿ ಸಂಖ್ಯೆ ಇರುವ ನಕಲಿ ಆರ್.ಸಿ ಕಾರ್ಡ್ ಸೃಷ್ಠಿಸಿ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಯನ್ನು ವಂಚಿಸಿದ್ದು ಈ ಬಗ್ಗೆ ಕೊಡಗು ಜಿಲ್ಲಾ ಆರ್.ಟಿ.ಒ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯಮಾರಾಟ ಪ್ರಕರಣ

            ದಿನಾಂಕ: 07-11-2019 ರಂದು ವಿರಾಜಪೇಟೆ ತಾಲ್ಲೂಕು ದೇವಣಗೇರಿ ಗ್ರಾಮದ ಸಾರ್ವಜನಿಕ ರಸ್ತೆ ಬದಿಯಲ್ಲಿ ಪ್ರವೀಣ್ ಎಂಬವವರು ಅವರ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿರುವುವಾಗಿ ಬಂದ ಮಾಹಿತಿ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪಿ.ಎಸ್. ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಪ್ರವೀಣವರನ್ನು ದಸ್ತಗಿರಿ ಮಾಡಿದ್ದು ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

            ವಿರಾಜಪೇಟೆ ಪಟ್ಟಣದಲ್ಲಿರುವ ಎಲ್& ಟಿ ಫೈನಾನ್ಸ್ ಲಿಮಿಟೆಡ್ ಸಂಸ್ಥೆಯ ಶಾಖೆಯಲ್ಲಿ ವಿರಾಜಪೇಟೆ, ನೆಹರೂನಗರ ನಿವಾಸಿ ಶಾವಾಸ್ ಎಂಬುವವರು ಸಾರ್ವಜನಿಕರಿಗೆ ಸಾಲ ಕೊಡಿಸುವ ಮತ್ತು ಸಾಲದ ಹಣವನ್ನು ಕಂತುಗಳ ರೂಪದಲ್ಲಿ ಸಂಗ್ರಹಿಸಿ ಸಂಸ್ಥೆಗೆ ಪಾವತಿಸುವ ಕೆಲಸ ನಿರ್ವಹಿಸುತ್ತಿದ್ದರು. ದಿನಾಂಕ: 08-01-2018 ರಿಂದ 14-08-2019 ರ ವರೆಗೆ ಸಾಲ ಪಡೆದ ಸಾರ್ವಜನಿಕರಿಂದ ಸಂಗ್ರಹಿಸಿದ ಸಾಲ ಮರುಪಾವತಿ ಹಣ 1,99,451 ರೂ.ಗಳನ್ನು ಸಂಸ್ಥೆಗೆ ಪಾವತಿಸದೇ ದುರುಪಯೋಗ ಪಡಿಸಿಕೊಂಡು ಸಾರ್ವಜನಿಕರಿಗೆ ಹಾಗೂ ಸಂಸ್ಥೆಗೆ ನಷ್ಟವಾಗಿದ್ದು ಈ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ರಾದ ಹರೀಶ್ ಎಂಬುವವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ನಗರ ಠಾಣೆ ಪೊಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ ಪ್ರಕರಣ

            ದಿನಾಂಕ: 29-10-2019 ರಂದು ಸೋಮವಾರಪೇಟೆ ತಾಲ್ಲೂಕು ಮಾದಾಪುರ ಗ್ರಾಮದಲ್ಲಿರುವ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗಕ್ಕೆ ಕಾಂಪೌಂಡ್ ನಿರ್ಮಿಸಲು ಸುತ್ತಳತೆ ಮಾಡುತ್ತಿರುವಾಗ ಮಾದಾಪುರ ಗ್ರಾಮದ ನಿವಾಸಿ ಗಣೇಶ್ ಎಂಬುವವರು ತೋಟಗಾರಿಕಾ ಇಲಾಖಾ ಸಹಾಯಕ ತೋಟಗಾರಿಕೆ ನಿರ್ದೇಶಕರವರು ತಮ್ಮ ಕರ್ತವ್ಯ ನಿರ್ವಹಿಸಲು ತಡೆಒಡ್ಡಿ ಬೆದರಿಕೆ ಹಾಕಿದ್ದು ಈ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್ ಡಿಕ್ಕಿ ಪಾದಚಾರಿಗೆ ಗಾಯ

            ದಿನಾಂಕ: 06-11-2019 ರಂದು ಕುಶಾಲನಗರ ಪಟ್ಟಣದ ಗಂಧಕೋಟೆ ಜಂಕ್ಷನ್ ಬಳಿ ಕೆಎ-12-ಜೆ-4209 ರ ಸ್ಕೂಟರನ್ನು ಸವಾರ ಕರಿಯಪ್ಪ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ ಚಂದ್ರು ಎಂಬುವವರಿಗೆ ಡಿಕ್ಕಿ ಪಡಿಸಿದ್ದರಿಂದ ಗಾಯಗೊಂಡಿದ್ದು ಈ ಬಗ್ಗೆ ಗಾಯಾಳುವಿನ ಪತ್ನಿ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ

            ದಿನಾಂಕ: 07-11-2019 ರಂದು ಸೋಮವಾರಪೇಟೆ ತಾಲ್ಲೂಕು ಹೊಸಪಟ್ಟಣದ ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ-12-ಎನ್-8678 ರ ಕಾರನ್ನು ಅದರ ಚಾಲಕ ಸೋಮಶೇಖರ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಕಾರು ರಸ್ತೆಬದಿಗೆ ಮಗುಚಿಕೊಂಡ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಹಾಗೂ ತಂಗಪ್ಪನ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಪ್ರದೀಪ್ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ

            ದಿನಾಂಕ: 07-11-2019 ರಂದು ಕುಶಾಲನಗರ ಪಟ್ಟಣದ ತಾವರೆಕೆರೆ ಬಳಿ ಸಾರ್ವಜನಿಕ ರಸ್ತೆಯಲ್ಲಿ ಟಿಎನ್-34-ಪಿ-9038 ರ ಲಾರಿಯನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಮುಂದೆ ಹೋಗುತ್ತಿದ್ದ ಕೆಎ-12-ಎಂಎ-1016 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಅದರ ಮುಂದೆ ಹೋಗುತ್ತಿದ್ದ ಬಸ್ಸಿಗೆ ಡಿಕ್ಕಿಯಾಗಿ ಕಾರು ಜಖಂಗೊಂಡಿದ್ದು ಈ ಬಗ್ಗೆ ರಾಜೇಶ್ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.