News

‘ವಿದ್ಯುನ್ಮಾನ ಸಾಕ್ಷ್ಯ’ ಸಂಗ್ರಹಣೆ ಮತ್ತು ಸಂರಕ್ಷಣೆ ಕುರಿತು ಕಾನೂನು ಅರಿವು ಕಾರ್ಯಾಗಾರ

            ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಬೆಂಗಳೂರು ಮತ್ತು ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖೆ ವತಿಯಿಂದ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ದಿನಾಂಕ: 23-11-2019 ರಂದು ಮಡಿಕೇರಿಯ ಕೊಡಗು ಜಿಲ್ಲಾ ಪಂಚಾಯತ್ ಭವನದಲ್ಲಿ ‘ವಿದ್ಯುನ್ಮಾನ ಸಾಕ್ಷ್ಯ’ ಸಂಗ್ರಹಣೆ ಮತ್ತು ಸಂರಕ್ಷಣೆ ಬಗ್ಗೆ ಒಂದು ದಿನದ ಕಾನೂನು ಅರಿವು ಕಾರ್ಯಾಗಾರ ನಡೆಯಿತು.

            ಈ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ಹೈಕೋರ್ಟ್ನ ನ್ಯಾಯಾಧೀಶರಾದ ಜಸ್ಟಿಸ್ ಎಸ್.ಎನ್. ಸತ್ಯನಾರಾಯಣ ರವರು ಉದ್ಘಾಟಿಸಿದ್ದು, ಅಧ್ಯಕ್ಷತೆಯನ್ನು ರಾಜ್ಯ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಜಸ್ಟಿಸ್ ಕೆ. ನಟರಾಜನ್ ರವರು ವಹಿಸಿದ್ದು ಮುಖ್ಯ ಅತಿಥಿಗಳಾಗಿ ರಾಜ್ಯ ಹೈಕೋರ್ಟ್ನ ನ್ಯಾಯಾಧೀಶರಾದ ಜಸ್ಟಿಸ್ ಸಚಿನ್ ಶಂಕರ್ ಮಗದುಮ್ ರವರು ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ.ಸುಮನ್ ಡಿ.ಪಿ, ಐ.ಪಿ.ಎಸ್, ಜಿಲ್ಲೆಯ ಎಲ್ಲಾ ಡಿವೈ.ಎಸ್.ಪಿ, ಪಿ.ಐ, ಮತ್ತು ಪಿ.ಎಸ್.ಐ ರವರು, ನ್ಯಾಯಾಂಗ, ಅಬಕಾರಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದು ಕೊಡಗು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಶ್ರೀ ವಿ.ವಿ ಮಲ್ಲಾಪುರ್ ರವರು ಸ್ವಾಗತಿಸಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ನೂರುನ್ನಿಸ ಕಾರ್ಯಕ್ರಮ ನಿರೂಪಿಸಿದ್ದು ನ್ಯಾಯಾಧೀಶರಾದ ಭೃಂಗೇಶ್ ರವರು ವಂದನಾರ್ಪಣೆ ನಡೆಸಿಕೊಟ್ಟಿರುತ್ತಾರೆ.

            ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ಕಾರ್ಯಾಗಾರದಲ್ಲಿ ಜಿಲ್ಲೆಯ ನ್ಯಾಯಾಂಗ ಇಲಾಖೆ ಅಧಿಕಾರಿಗಳು, ಸರ್ಕಾರಿ ಅಭಿಯೋಜಕರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೈಬರ್ ಕ್ರೈಂ ಹಾಗೂ ಡಿಜಿಟಲ್ ವಿಧಿವಿಜ್ಞಾನದ ಮಾಹಿತಿ, ಸೈಬರ್ ಅಪರಾಧ ಸೇರಿದಂತೆ ಹಲವು ರೀತಿಯ ಅಪರಾಧ ಪ್ರಕರಣಗಳ ತನಿಖೆಯಲ್ಲಿ ವಿದ್ಯುನ್ಮಾನ ಸಾಕ್ಷಿಗಳ ಸಂಗ್ರಹಣೆ ಮತ್ತು ಸಂರಕ್ಷಣೆ ಕುರಿತು ತರಬೇತಿ ನೀಡಲಾಯಿತು.

                ಈ ಕಾಯಾರ್ಯಾಗಾರದಲ್ಲಿ ಭಾಗವಹಿಸಿದ್ದ ಹೈಕೊರ್ಟ್ ನ್ಯಾಯಮೂರ್ತಿಗಳ ಮುಖ್ಯಸ್ಥಿಕೆಯಲ್ಲಿ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಎಸ್.ಆರ್ ಸೋಮಶೇಖರ, ಡಾ. ಮನೀಶ್ ಕುಮಾರ್, ಸಹಾಯಕ ಪ್ರಾದ್ಯಾಪಕರು, ಗಣಕಯಂತ್ರ ವಿಭಾಗ, ಎಂ.ಎಸ್ ರಾಮಯ್ಯ ತಾಂತ್ರಿಕ ವಿಜ್ಞಾನ ಸಂಸ್ಥೆ, ಬೆಂಗಳೂರು, ಶ್ರೀ ಯಶವಂತ್ ಕುಮಾರ್, ಪೊಲೀಸ್ ನಿರೀಕ್ಷಕರು, ಸೈಬರ್ ಕ್ರೈಂ ಪೊಲೀಸ್ ಠಾಣೆ, ಬೆಂಗಳೂರು, ಶ್ರೀ ಮಧುಕರ್ ದೇಶಪಾಂಡೆ, ವಿಶೇಷ ಸರ್ಕಾರಿ ಅಭಿಯೋಜಕರು, ಜಾರಿ ನಿರ್ದೇಶನಾಲಯ,ಬೆಂಗಳೂರು ರವರು ವಿದ್ಯುನ್ಮಾನ ಸಾಕ್ಷ್ಯಕ್ಕೆ ಸಂಬಂದಿಸಿದ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿರುತ್ತಾರೆ.

Crime News

ಹಲ್ಲೆ ಪ್ರಕರಣ

          ದಿನಾಂಕ: 23-11-2019 ರಂದು ಮಡಿಕೇರಿ ತಾಲ್ಲೂಕು ಕಗ್ಗೋಡ್ಲು ಗ್ರಾಮದ ನಿವಾಸಿ ವಿಶ್ವನಾಥ ಎಂಬುವವರು ರಸ್ತೆಯ ಬಳಿ ನಿಂತಿರುವಾಗ ಅವರಿಗೆ  ಪರಿಚಯವಿರುವ ಸಂದೀಪ್, ರಂಜನ್ ಹಾಗೂ ಮತ್ತೊಬ್ಬ ವ್ಯಕ್ತಿ ಬೈಕ್ ನಲ್ಲಿ ಬಂದು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿದ್ದು ಈ ಬಗ್ಗೆ ವಿಶ್ವನಾಥ್ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟ ಪ್ರಕರಣ       

    ದಿನಾಂಕ: 23-11-2019 ರಂದು ವಿರಾಜಪೇಟೆ ಠಾಣಾ ಪಿ.ಎಸ್.ಐ ರವರಿಗೆ ಅಕ್ರಮ ಮರಳು ಸಾಗಾಟದ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ವಿರಾಜಪೇಟೆ ತಾಲ್ಲೂಕು ಅರಮೇರಿ ಗ್ರಾಮದ ಬಳಿ ಅಕ್ರಮವಾಗಿ ಕೆಎ-12-ಟಿ-7241 ರ ಟ್ರ್ಯಾಕ್ಟರ್ ನಲ್ಲಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿದ್ದು ಟ್ರ್ಯಾಕ್ಟರ್ ಚಾಲಕ ಸುಶಾಂತ್ ರಾಯ್ ಮತ್ತು ಮಾಲೀಕರ ವಿರುದ್ದ ಪಿ.ಎಸ್.ಐ ವೀಣಾ ನಾಯಕ್  ರವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.