News

ಮಕ್ಕಳ ಸ್ನೇಹಿ ಪೊಲೀಸ್: ಪೊಲೀಸ್‍ ಇಲಾಖೆ ವತಿಯಿಂದ ವಿನೂತನ ಕಾರ್ಯಕ್ರಮ

ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ‘ತೆರೆದ ಮನೆ’ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯಲ್ಲಿ ವಿನೂತನವಾಗಿ ಪ್ರಾರಂಭಿಸಲಾಗಿದೆ.  ಪೊಲೀಸರೆಂದರೆ ಜನಸಾಮಾನ್ಯರಲ್ಲಿ ಇರುವ ಭಯವನ್ನು ಬಾಲ್ಯದಲ್ಲಿಯೇ ತೊಡೆದುಹಾಕುವ  ಮಹತ್ವದ ಕಾರ್ಯಕ್ರಮವಾಗಿದೆ.

ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಪೊಲೀಸ್ ಠಾಣೆ ಮತ್ತು ಪೊಲೀಸ್ ವ್ಯವಸ್ಥೆಯ ಕುರಿತು ಪೂರ್ಣ ಪರಿಚಯ ಮಾಡಿಕೊಡುವ ಪ್ರಯತ್ನವು ಇದಾಗಿದೆ.  ಈ ಕಾರ್ಯಕ್ರಮವನ್ನು ಜಿಲ್ಲೆಯ ಮಡಿಕೇರಿ ಗ್ರಾಮಾಂತರ, ಮಡಿಕೇರಿ ನಗರ ಮತ್ತು ಶನಿವಾರಸಂತೆ ಪೊಲೀಸ್‍ ಠಾಣೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಇದನ್ನು ವಿಸ್ತರಿಸಲಾಗುವುದು.

ಸಮಾಜದಲ್ಲಿ ಜನರನ್ನು ರಕ್ಷಿಸುವ ಪೊಲೀಸರೆಂದರೆ  ಭಯದ ವಾತವರಣ  ಬಲವಾಗಿ ಬೇರೂರಿಬಿಟ್ಟಿದ್ದು, ಈ ಭಯವನ್ನು ಹೋಗಲಾಡಿಸಿ ಪೊಲೀಸರೆಂದರೆ  ಸಮಾಜಮುಖಿ ಕೆಲಸ ಮಾಡುವವರು ಮತ್ತು ಜನಸ್ನೇಹಿಯಾಗಿ ಇರುವವರು ಎನ್ನುವುದನ್ನು ಮನದಟ್ಟು ಮಾಡಿಕೊಡುವ ಸಲುವಾಗಿ ತಿಂಗಳಲ್ಲಿ ಒಂದು ದಿನ ಪೊಲೀಸ್ ಠಾಣೆಯಲ್ಲಿ ಈ ಕಾರ್ಯಕ್ರವನ್ನು ನಡೆಸಲಾಗುತ್ತಿದೆ.

ಈ ಕಾರ್ಯಕ್ರಮ ನಡೆಸುವ ದಿನ ಸಮೀಪದ ಶಾಲಾ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು  ಪೊಲೀಸ್ ಮತ್ತು ಶಾಲಾ ಮಕ್ಕಳ  ಬಾಂಧವ್ಯ ವೃದ್ಧಿ, ವಿದ್ಯಾರ್ಥಿಗಳಿಗೆ ಕಾನೂನು ತಿಳುವಳಿಕೆ, ಮಕ್ಕಳ ಸುರಕ್ಷತೆ, ರಸ್ತೆ ಸಂಚಾರ ನಿಯಮ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಕಾನೂನು ಅರಿವನ್ನು ನೀಡಲಾಗುತ್ತಿದೆ.

ಪೊಲೀಸ್ ವ್ಯವಸ್ಥೆಯ ಪರಿಚಯ ಮಾಡಿಕೊಳ್ಳುವ ಕುರಿತು  ಪೊಲೀಸರ ಕರ್ತವ್ಯ ನಿರ್ವಹಣಾ ವಿಧಾನ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಅಪರಾಧ ವಿಭಾಗ ಹಾಗೂ ಇತರೆ ಎಲ್ಲಾ ವಿಭಾಗಗಳ ಮತ್ತು ಪೊಲೀಸ್ ದಾಖಲೆಗಳ ಮಾಹಿತಿಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ.

ಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನಿನ ಬಗ್ಗೆ ತಿಳುವಳಿಗೆ ಮತ್ತು ಪೊಲೀಸ್ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಿದರೆ ಉತ್ತಮ ನಾಗರಿಕರನ್ನಾಗಿ ರೂಪಿಸಬಹುದು ಎಂಬ ಉದ್ದೇಶದೊಂದಿಗೆ ಈ ಕಾರ್ಯಕ್ರವನ್ನು ನಡೆಸಲಾಗುತ್ತಿದೆ.

Crime News

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 21-01-2020 ರಂದು ಕುಶಾಲನಗರ ಪಟ್ಟಣದ ಬೈಚನಹಳ್ಳಿ ನಿವಾಸಿ ರಾಜು ಎಂಬುವವರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ  ಮೃತರ ಪತ್ನಿ  ನೀಡಿದ ದೂರಿನ ಮೇರ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಶಾಲಾ ವಾಹನಕ್ಕೆ ಕಾರು ಡಿಕ್ಕಿ   

ದಿನಾಂಕ: 21-01-2020 ರಂದು ಸೋಮವಾರಪೇಟೆ ತಾಲ್ಲೂಕು ಐಗೂರು ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಎಂಎ-6043 ರ ಕಾರನ್ನು ಅದರ ಚಾಲಕ ಮುದ್ದಯ್ಯ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ವ್ಯಾನ್ ಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನ್ ಹಾಗೂ ಕಾರು ಜಖಂಗೊಂಡಿದ್ದು ಕಾರಿನ ಚಾಲಕ, ವ್ಯಾನ್ ಚಾಲಕ ಮತ್ತು ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕುಟ್ಟಪ್ಪ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.