News

“ಸುಬಾಹು” ಇ-ಬೀಟ್ ಉದ್ಘಾಟನೆ:

        ದಿನಾಂಕ: 28-02-2020 ರಂದು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಸುಧಾರಿತ ಪೊಲೀಸ್ ಗಸ್ತು ವ್ಯವಸ್ಥೆಯಾಗಿರುವ “ಸುಬಾಹು” ಇ–ಬೀಟ್ ತಂತ್ರಾಶ ವ್ಯವಸ್ಥೆಯ ಉದ್ಘಾಟನಾ ಕಾರ್ಯಕ್ರಮ ಜಿಲ್ಲಾ ಪೊಲೀಸ್ ಕಛೇರಿ ಸಭಾಂಗಣದಲ್ಲಿ ನಡೆಯಿತು.

        ಈ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ. ಡಿ.ಪಿ ಸುಮನ್, ಐ.ಪಿ.ಎಸ್  ರವರು ಉದ್ಘಾಟಿಸಿ ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ಸುಬಾಹು ಇ-ಬೀಟ್ ಕಾರ್ಯನಿರ್ವಹಣೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಎಲ್ಲಾ ಠಾಣೆಗಳ ಪೊಲೀಸ್ ಅಧಿಕಾರಿಗಳಿಗೆ ಸ್ಮಾರ್ಟ್ ಸೆಕ್ಯೂರ್ ಸಂಸ್ಥೆಯ ಶ್ರೀ ಮಹೇಂದ್ರ ರವರು ತಂತ್ರಾಶ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ಉಪವಿಭಾಗ ಡಿವೈ.ಎಸ್.ಪಿ ಶ್ರೀ ದಿನೇಶ್ ಕುಮಾರ್ ರವರು ಸ್ವಾಗತಿಸಿದ್ದು, ಪೊಲೀಸ್ ನಿರೀಕ್ಷಕರಾದ ಶ್ರೀ ಎಸ್.ಎನ್ ಜಯರಾಮ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದ್ದು, ಪೊಲೀಸ್ ನಿರೀಕ್ಷಕರರಾದ ಶ್ರೀ ಪಿ.ಪಿ ಸೋಮೇಗೌಡ ರವರು ವಂದಿಸಿದರು.

ಬೆಂಗಳೂರು ಮೂಲದ ಸ್ಮಾರ್ಟ್  ಸೆಕ್ಯೂರ್ ಎಂಬ ಸಂಸ್ಥೆಯು REZLER SYSTMS E-BEAT SOFTWARE SOLUTIONS ಇ-ತಂತ್ರಾಂಶವನ್ನು ರೂಪಿಸಿದ್ದು, ಈ ತಂತ್ರಾಂಶವನ್ನು ಪೊಲೀಸ್ ಗಸ್ತು ವ್ಯವಸ್ಥೆಯನ್ನು ಸುಧಾರಿಸಲು ಅಳವಡಿಸಿಕೊಳ್ಳಲಾಗಿರುತ್ತದೆ. ಈ ತಂತ್ರಾಂಶದಲ್ಲಿ ನಿರ್ದಿಷ್ಟಪಡಿಸಿದ ಸ್ಥಳಗಳ ಅಕ್ಷಾಂಶ-ರೇಖಾಂಶಗಳನ್ನು ಮೊದಲೇ ಭರ್ತಿ ಮಾಡಲಾಗಿರುತ್ತದೆ. ಈ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಅಪ್ಲಿಕೇಷನ್ ಅನ್ನು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಸ್ಮಾರ್ಟ್ ಫೋನ್ ನಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಕ್ಯೂ.ಆರ್ ಕಾರ್ಡ್ ಗಳನ್ನು ಬೀಟ್ ಗೆ ತೆರಳುವ ಏರಿಯಾದ ಮನೆ, ಕಟ್ಟಡಗಳ ಒಳಗೆ ಅಳವಡಿಸಿದರೆ ಆ ಸುತ್ತಮುತ್ತಲಿನ ಏರಿಯಾದಲ್ಲಿ ಗಸ್ತು ಪೊಲೀಸರು ಹೋದಾಗ ಅವರು ತಮ್ಮ ಮೊಬೈಲ್ ನಲ್ಲಿ ಅಳವಡಿಸಿಕೊಂಡಿರುವ ಅಪ್ಲಿಕೇಷನ್ ಅನ್ನು ಆನ್ ಮಾಡಿದಾಗ ಸಿಬ್ಬಂದಿಗಳ ಹಾಜರಾತಿಯು ನೋಂದಣಿಯಾಗುತ್ತದೆ. ಈ ತಂತ್ರಾಂಶವು ಗಸ್ತು ಭೇಟಿಯ ಮಾಹಿತಿಯನ್ನು ಮುಖ್ಯ ಸರ್ವರ್ ಗೆ ಕಳುಹಿಸುವ ಮೊದಲು ಮನೆಯ ಮಾಲೀಕರಿಗೆ ಹಾಗೂ ನಿಗದಿತ ವ್ಯಕ್ತಿಗೆ ಸ್ವಯಂ ಚಾಲಿತವಾಗಿ ಎಸ್.ಎಂ.ಎಸ್ ಮೂಲಕ ಕಳುಹಿಸುತ್ತದೆ. ಸರ್ವರ್ ನಲ್ಲಿ ಹಿಸ್ಟರಿ ಶೀಟರ್ ಗಳ ಭಾವಚಿತ್ರ ಹಾಗೂ ಅಪರಾಧ ದಾಖಲೆಗಳ ವಿವರ ಅಪ್ಲೋಡ್ ಆಗಿರುತ್ತದೆ.

  • ಈ ತಂತ್ರಾಂಶದ ಮೂಲಕ ಅಧಿಕಾರಿಗಳು ಕುಳಿತಲ್ಲಿಂದಲೇ ಸಿಬ್ಬಂದಿಗಳ ಗಸ್ತು ಚಲನವಲನಗಳ ಮೇಲೆ ನಿಗಾ ಇಡಬಹುದಾಗಿರುತ್ತದೆ.
  • ಮನೆ ಕಳವಿನಂತಹ ಅಪರಾಧ ಕೃತ್ಯಗಳನ್ನು ತಡೆಯಬಹುದಾಗಿರುತ್ತದೆ.
  • ಬೀಟ್ ಸಿಬ್ಬಂದಿಗಳು ನಿಗದಿತ ವೇಳೆಯಲ್ಲಿ ನಿಗದಿತ ಸ್ಥಳಕ್ಕೆ ಭೇಟಿ ನೀಡದೆ ಹೋದಲ್ಲಿ ಆ ಬಗ್ಗೆ ಪತ್ತೆ ಹಚ್ಚಬಹುದಾಗಿರುತ್ತದೆ.
  • ಹಿರಿಯ ಅಧಿಕಾರಿಗಳು ಗಸ್ತು ಪೊಲೀಸರನ್ನು ಈ ತಂತ್ರಾಂಶದ ಮೂಲಕ ನೈಜ ಸಮಯದಲ್ಲಿ ಹಿಂಬಾಲಿಸಬಹುದಾಗಿರುತ್ತದೆ.

ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಶನಿವಾರಸಂತೆ ಹಾಗೂ ಗೋಣಿಕೊಪ್ಪ ಪೊಲೀಸ್ ಠಾಣೆಗಳಲ್ಲಿ ಪ್ರಾಯೋಗಿಕವಾಗಿ ಈ ತಂತ್ರಾಶವನ್ನು ಅಳವಡಿಸಿಕೊಂಡು ಗಸ್ತು ವ್ಯವಸ್ಥೆಯನ್ನು ಪರಿಶೀಲಿಸಲಾಗಿತ್ತು. ಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದುದರಿಂದ ಹಾಗೂ ಬೀಟ್ ಗೆ ತೆರಳುವ ಸಿಬ್ಬಂದಿಗಳಲ್ಲಿ ತಾವು ನಿರ್ವಹಿಸಿದ ಬೀಟ್ ಕರ್ತವ್ಯಕ್ಕೆ ಸಂಬಂಧಿಸಿದಂತೆ ಹೊಣೆಗಾರಿಕೆಯನ್ನು ಉಂಟು ಮಾಡುವುದರಿಂದ ಜಿಲ್ಲೆಯ ಉಳಿದ ಎಲ್ಲಾ ಪೊಲೀಸ್ ಠಾಣೆಗಳಲ್ಲಿಯೂ ಸಹ ಈ ತಂತ್ರಾಂಶವನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಬೀಟ್ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಲು ಹಾಗೂ ಆ ಮೂಲಕ ಪೊಲೀಸ್ ಸಿಬ್ಬಂದಿಗಳಿಗೆ ಹೊಣೆಗಾರಿಕೆಯನ್ನು ವಹಿಸುವುದರೊಂದಿಗೆ ಸಾರ್ವಜನಿಕರ ರಕ್ಷಣೆ ಜವಾಬ್ದಾರಿಯ ದೃಷ್ಟಿಯಿಂದಲೂ ಸಹ ತಂತ್ರಾಂಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿರುತ್ತದೆ.

Crime News

ಹಲ್ಲೆ ಪ್ರಕರಣ

          ದಿನಾಂಕ: 27-02-2020 ರಂದು ರಾತ್ರಿ 10-00 ಗಂಟೆಗೆ ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಗ್ರಾಮದ ತ್ಯಾಗರಾಜ ಕಾಲೋನಿ ನಿವಾಸಿ ನಂದೀಶ್ ಎಂಬುವವರ ಮನೆಗೆ ಅರಕಲಗೂಡು ತಾಲ್ಲೂಕು ಬಾಗದಾಳು ಗ್ರಾಮದ ನಿವಾಸಿಗಳಾದ ಕಾಂತರಾಜು . ಪ್ರಭಾ ಹಾಗೂ ಇತರ ಏಳೆಂಟು ಜನರು ಕಾರು ಬೈಕುಗಳಲ್ಲಿ ಬಂದು ಅಕ್ರಮ ಪ್ರವೇಶ ಮಾಡಿ ವೈಯಕ್ತಿಕ ವಿಚಾರದಲ್ಲಿ ಜಗಳ ಮಾಡಿ ಮನೆಯಲ್ಲಿದ್ದ ನಂದೀಶ್ ರವರ ಪತ್ನಿಗೆ ಅವಾಚ್ಯ ಪದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನಂದೀಶ್ ರವರ ಪತ್ನಿ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 27-02-2020 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ – ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಕೆಎ-12-ಬಿ-7628 ರ ಟಿಪ್ಪರ್ ಲಾರಿಯನ್ನು ಅದರ ಚಾಲಕ ಚೆನ್ನರೆಡ್ಡಿ ಎಂಬುವವರು ಅತಿವೇಗ ಮತ್ತು ಅಜಾಗರೂತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಜೆಡ್-7650 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಯೇಸುದಾಸ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 27-02-2020 ರಂದು ಮಡಿಕೇರಿ ನಗರದ ರಾಜಾಸೀಟು ರಸ್ತೆಯಲ್ಲಿ ಕೆಎ-12-ಪಿ-1045 ರ ಓಮ್ನಿ ಕಾರಿನ ಚಾಲಕ ಜಗನ್ನಾಥ ಎಂಬುವವರು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ವಿದ್ಯಾರ್ಥಿನಿ ಯೋರ್ವಳಿಗೆ ಡಿಕ್ಕಿಪಡಿಸಿದ ಪರಿಣಾಮ ವಿದ್ಯಾರ್ಥಿನಿ ಗಾಯಗೊಂಡಿದ್ದು ಈ ಬಗ್ಗೆ ಗಾಯಾಳುವಿನ ತಾಯಿ ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.