News

ಕೋವಿಡ್-19 ಹರಡುವಿಕೆ ತಡೆಗಟ್ಟಲು ಲಾಕ್ ಡೌನ್ ಆದೇಶ:

ಕೋವಿಡ್ 19 ಹರಡುವಿಕೆಯನ್ನು ತಡೆಗಟ್ಟಲು ಕರ್ನಾಟಕ ರಾಜ್ಯ ಸರಕಾರದ ಆದೇಶದಂತೆ ಕೊಡಗು ಜಿಲ್ಲೆಯಲ್ಲಿಯೂ ಸಹ ಮಾ.31ರ ವರೆಗೆ ಲಾಕ್‌ಡೌನ್‌ ನಿಯಮ ಅನ್ವಯವಾಗಲಿದ್ದು ನಿಯಮ ಉಲ್ಲಂಘಿಸುವವರ ವಿರುದ್ದ ಪೊಲೀಸ್‌ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ.
ಕೊಡಗು ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲಾ ಅಂತಾರಾಜ್ಯ ಮತ್ತು ಅಂತರ್‌ ಜಿಲ್ಲೆಗಳನ್ನು
ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಒಟ್ಟು 13 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಕೊಡಗಿಗೆ ಬರುವ ಎಲ್ಲ ವಾಹನಗಳಿಗೆ ತಡೆ ಒಡ್ಡಲಾಗುತ್ತಿದ್ದು, ತುರ್ತು ಕೆಲಸ ಮತ್ತು ಅಗತ್ಯ ವಸ್ತುಗಳ ಪೂರೈಕೆಯ ವಾಹನಗಳನ್ನು ತಪಾಸಣೆಯೊಂದಿಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಶಾಲಾ ಮಕ್ಕಳನ್ನು ಜಿಲ್ಲೆಯ ಹೊರ ಭಾಗಗಳಿಂದ ಕರೆ ತರಲು ಪೊಲೀಸ್‌ ಇಲಾಖೆಯ ಮೂಲಕವೇ ವಿಶೇಷ ಪಾಸ್‌ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರು ಸರ್ಕಾರದ ಆದೇಶ ಪಾಲಿಸಿ , ಕೋವಿಡ್ 19 ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಲು ಕೋರಿದೆ.

Crime News

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪ್ರಕರಣ

          ದಿನಾಂಕ: 23-03-2020 ರಂದು ಮಡಿಕೇರಿ ತಾಲ್ಲೂಕು ನಾಪೋಕ್ಲು  ಗ್ರಾಮದ ಬೇತು ರಸ್ತೆಯಲ್ಲಿ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಕೊಡಗು ಜಿಲ್ಲಾಡಳಿತದ ಆದೇಶವನ್ನು ಪಾಲಿಸದೇ ಸಾರ್ವಜನಿಕ ಸ್ಥಳದಲ್ಲಿ ಐದಾರು ಜನರು ಗುಂಪುಗೂಡಿಕೊಂಡು ಹೋಗುತ್ತಿದ್ದು. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ನಾಪೋಕ್ಲು ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ನವೀನ್ ರವರು ನಿಷೇದಾಜ್ಞೆಯ ಬಗ್ಗೆ ತಿಳಿಸಿ ಮನೆಗೆ ಹೋಗುವಂತೆ ತಿಳಿಸಿದಾಗ ಗುಂಪಿನಲ್ಲಿದ್ದ ಬೇತು ಗ್ರಾಮದ ನಿವಾಸಿ ಶಂಶುದ್ದೀನ್ ಎಂಬುವವರು ಅವಾಚ್ಯ ಪದಗಳಿಂದ ಬೈದು ಸಮವಸ್ತ್ರವನ್ನು ಎಳೆದು ಹರಿದುಹಾಕಿ ಹಲ್ಲೆ ಮಾಡಿ ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಆಕಸ್ಮಿಕವಾಗಿ ಮರದಿಂದ ಬಿದ್ದು ವ್ಯಕ್ತಿ ಸಾವು

          ದಿನಾಂಕ: 16-03-2020 ರಂದು ಮಡಿಕೇರಿ ತಾಲ್ಲೂಕು ಪೆರಾಜೆ ಗ್ರಾಮದ ನಿವಾಸಿ ಪದ್ಮಯ್ಯನಾಯ್ಕ ಎಂಬುವವರು ಅವರ ತೋಟದಲ್ಲಿ ಮರ ಹತ್ತಿ ಕಾಳುಮೆಣಸು ಕುಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ನಿದ್ದು ಗಾಯಗೊಂಡಿದ್ದವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 23-03-2020 ರಂದು ಮೃತಪಟ್ಟಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಎತ್ತು ತಿವಿದು ವ್ಯಕ್ತಿ ಸಾವು

          ದಿನಾಂಕ: 23-03-2020 ರಂದು ಮಡಿಕೇರಿ ತಾಲ್ಲೂಕು ನರಿಯಂದಡ ಗ್ರಾಮದ ನಿವಾಸಿ ಸುಬ್ರಮಣ್ಯ ಎಂಬುವವರು ಅವರ ಎರಡು ಎತ್ತುಗಳನ್ನು ಗದ್ದೆ ಉಳುವ ಸಲುವಾಗಿ ಹಿಡಿದುಕೊಂಡು ಹೋಗುತ್ತಿರುವಾಗ ಎತ್ತುಗಳು ಸುಬ್ರಮಣಿ ರವರ ಮೇಲೆ ಎರಗಿ ತಿವಿದ ಪರಿಣಾಮ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಮೃತರ ತಾಯಿ ನೀಡಿದ ದೂರಿನ ಮೇರೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.