News

ಮಡಿಕೇರಿ ನಗರದಲ್ಲಿ ವಾಹನ ಸಂಚಾರ ಮತ್ತು ನಿಲುಗಡೆ ತಾತ್ಕಾಲಿಕ ಬದಲಾವಣೆ:
ಕೋವಿಡ್-19 ಸಂಬಂದ ಕೊಡಗು ಜಿಲ್ಲಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು ಸಾರ್ವಜನಿಕರು ಅಗತ್ಯ ವಸ್ತು ಖರೀದಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತವು ವಾರದಲ್ಲಿ ಮೂರು ದಿನ ಲಾಕ್ ಡೌನ್‌ ಸಡಿಲಿಕೆ ನೀಡಿ ಸಮಯ ನಿಗದಿಗೊಳಿಸಿರುತ್ತದೆ. ಈ ಸಮಯದಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುತ್ತದೆ. ಜೊತೆಗೆ ಜಿಲ್ಲಾ ಆಸ್ಪತ್ರೆಯ ಬದಲಾಗಿ ಕೋವಿಡ್‌ಯೇತರ ಆರೋಗ್ಯ ಸೇವೆಗಳಿಗಾಗಿ ಮಡಿಕೇರಿ ನಗರದಲ್ಲಿರುವ ಅಶ್ವಿನಿ ಆಸ್ಪತ್ರೆಯನ್ನು ಬಳಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮಡಿಕೇರಿ ನಗರದಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯಲ್ಲಿ ಕೆಲವು ತಾತ್ಕಾಲಿಕ ಬದಲಾವಣೆಯ ಅವಶ್ಯಕತೆ ಇರುವ ಬಗ್ಗೆ ಪೊಲೀಸ್‌ ಇಲಾಖೆಯ ಕೋರಿಕೆ ಮೇರೆ ಮಾನ್ಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ, ಕೊಡಗು ಜಿಲ್ಲೆ ರವರು ಸಾರ್ವಜನಿಕರ ಅನುಕೂಲಕ್ಕಾಗಿ ಮಡಿಕೇರಿ ನಗರ ವ್ಯಾಪ್ತಿಯ ಈ ಕೆಳಕಂಡ ಸ್ಥಳಗಳಲ್ಲಿ ದಿನಾಂಕ: 09-04-2020 ರಿಂದ ಏಕಮುಖ ವಾಹನ ಸಂಚಾರ ಮತ್ತು ವಾಹನ ನಿಲುಗಡೆ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡಿ ಆದೇಶಿಸಿರುತ್ತಾರೆ.

  1. ಮಡಿಕೇರಿ ನಗರದ ಅಶ್ವಿನಿ ಆಸ್ಪತ್ರೆ ಕಡೆಗೆ ಸಂಚರಿಸುವ ವಾಹನಗಳು ದ್ವಿಮುಖ ಸಂಚಾರದ ಬದಲಾಗಿ ಮುಖ್ಯ ರಸ್ತೆಯ ಈಸ್ಟ್ ಎಂಡ್‌ ಹೋಟೆಲ್‌ ಬಳಿಯ ರಸ್ತೆ ಮೂಲಕ ಅಶ್ವಿನಿ ಆಸ್ಪತ್ರೆಗೆ ಹೋಗುವುದು ಮತ್ತು ವಾಪಾಸ್ಸು ಶಾಂತಿನಿಕೇತನ ಮಾರ್ಗವಾಗಿ ಹಿಂತಿರುಗುವುದು.
  2. ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿ ಐ.ಜಿ ವೃತ್ತದಿಂದ ಶ್ರೀರಾಮ ಮಂದಿರದ ವರೆಗೆ ಲಘು ವಾಹನಗಳನ್ನು ರಸ್ತೆಯ ಎಡಭಾಗದ ಬದಲಾಗಿ ಬಲಭಾಗದಲ್ಲಿ ನಿಲುಗಡೆ ಮಾಡುವುದು.
  3. ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿ ಶಾಂತಿ ಕಾಫಿ ಮಳಿಗೆಯ ಮುಂಭಾಗದಿಂದ ಮೋರ್‌ ಮಳಿಗೆಯ ವರೆಗೆ ರಸ್ತೆಯ ಎಡಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ಮಾತ್ರ ನಿಲುಗಡೆಗೊಳಿಸುವುದು.
    ಸಾರ್ವಜನಿಕರು ಮೇಲ್ಕಂಡ ಬದಲಾವಣೆಗಳ ಅನುಸಾರ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಲು ಕೋರಿದೆ.

Crime News

ಬ್ಯಾಂಕ್ ಖಾತೆಯಿಂದ ಹಣ ತೆಗೆದು ವಂಚನೆ:

                ದಿನಾಂಕ: 09-04-2020 ರಂದು ರಂದು ವಿರಾಜಪೇಟೆ ತಾಲ್ಲೂಕು ಚೆಂಬೆಬೆಳ್ಳೂರು ಗ್ರಾಮದ ನಿವಾಸಿ ಬೆಳ್ಯಪ್ಪ ಎಂಬುವವರ ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆಯಿಂದ ಅವರಿಗೆ ತಿಳಿಯದಂತೆ ಹಂತ ಹಂತವಾಗಿ ರೂ. 23,000 ಹಣವನ್ನು ತೆಗೆದು ಮೋಸ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹೊಡೆದಾಟ ಪ್ರಕರಣ

ದಿನಾಂಕ: 09-04-2020 ರಂದು ರಾತ್ರಿ ವಿರಾಜಪೇಟೆ ನಗರದ ಸುಂಖದ ಕಟ್ಟೆ ಬಳಿ ಮುಖ್ಯ ರಸ್ತೆಯಲ್ಲಿ ರಾಜೇಶ್, ಅಂತೀಣಿ, ದೀಕ್ಷಿತ್ ಮತ್ತು ಲೋಹಿತ್ ಎಂಬುವವರು ಸಾರ್ವಜನಿಕ ನೆಮ್ಮದಿಗೆ ತೊಂದರೆಯಾಗುವಂತೆ ಪರಸ್ಪರ ಜಗಳ ಮಾಡುತ್ತಾ ಕೈ ಮಿಲಾಯಿಸಿ ತಳ್ಳಾಡಿಕೊಂಡು ಹೊಡೆದಾಟ ಮಾಡಿಕೊಂಡಿದ್ದು  ಈ ಬಗ್ಗೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.