News

ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳ ಫೇಸ್ಬುಕ್ ಖಾತೆಗಳಿಂದ ಸಮವಸ್ತ್ರದಲ್ಲಿರುವ ಭಾವಚಿತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ಪೊಲೀಸ್ ಅಧಿಕಾರಿಯ ಹೆಸರು, ಸಮವಸ್ತ್ರದಲ್ಲಿರುವ ಭಾವಚಿತ್ರವನ್ನು ಬಳಸಿ ನಕಲಿ ಖಾತೆ ತೆರೆದು, ಅಸಲಿ ಖಾತೆಯಲ್ಲಿರುವ ಫೇಸ್ಬುಕ್ ದಾರರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದು, ಇಂತಹ ನಕಲಿ ಖಾತೆಯ ಸತ್ಯಾಸತ್ಯತೆ ಅರಿಯದ ಫೇಸ್ಬುಕ್ ಬಳಕೆದಾರರು ರಿಕ್ವೆಸ್ಟ್ ಸ್ವೀಕರಿಸಿ ಸ್ನೇಹಿತರಾಗುತ್ತಾರೆ. ತದನಂತರದಲ್ಲಿ messenger ಮೂಲಕ ಆರ್ಥಿಕ ಸಂಕಷ್ಟದಲ್ಲಿರುವಂತೆ ಭಾವನಾತ್ಮಕ ಸಂದೇಶ ಕಳುಹಿಸಿ ತಕ್ಷಣ ಹಣ ವರ್ಗಾಯಿಸುವಂತೆ ಕೋರಿ, ಮರಳಿ ನೀಡುವುದಾಗಿ ಭರವಸೆ ನೀಡಿ ಹಣ ಪಡೆದು ನಂತರ ವಂಚಿಸುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಆದರೆ ಯಾವುದೇ ಸಂದರ್ಭದಲ್ಲಿಯೂ ಸಹ ಪೊಲೀಸ್ ಅಧಿಕಾರಿಗಳು ಈ ರೀತಿಯಲ್ಲಿ ಹಣವನ್ನು ಕೇಳುವುದಿಲ್ಲ. ಆದ್ದರಿಂದ ಈ ರೀತಿ ವಂಚಿಸುವ ಸೈಬರ್ ವಂಚಕರ ಬಗ್ಗೆ ಪೇಸ್ಬುಕ್ ಹಾಗು ಯಾವುದೇ ಸಾಮಾಜಿಕ ಜಾಲತಾಣದ ಬಳಕೆದಾರರು ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಜಾಲತಾಣದ ಮೂಲಕ ಯಾವುದೇ ವ್ಯವಹಾರಗಳನ್ನು ನಡೆಸುವ ಸಂದರ್ಭದಲ್ಲಿ ಸತ್ಯಾಸತ್ಯತೆಯನ್ನು ತಿಳಿದುಕೊಂಡು ವ್ಯವಹರಿಸುವಂತೆಯೂ ಹಾಗು ಸತ್ಯಾಸತ್ಯೆಯನ್ನು ಅರಿಯದೆ ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಿದಲ್ಲಿ ವಂಚನೆಗೊಳಗಾಗಬೇಕಾಗುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣವನ್ನು ಬಳಸುವ ಪ್ರತಿಯೊಬ್ಬರೂ ಸಹ ಅತ್ಯಂತ ಜಾಗರೂತಕೆಯಿಂದ ಇರಲು ಕೋರಿದೆ.
ಯಾವುದೇ ಕಾರಣಕ್ಕೂ ಯಾವುದೇ ಪೊಲೀಸ್/ಸರ್ಕಾರಿ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಾದ facebook, instagram ಮತ್ತು messenger ಮೂಲಕ ಆರ್ಥಿಕ ನೆರವು ಬಯಸುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಸಾರ್ವಜನಿಕ ಸಂಪರ್ಕಾಧಿಕಾರಿ,
ಜಿಲ್ಲಾ ಪೊಲೀಸ್ ಕಛೇರಿ, ಕೊಡಗು ಜಿಲ್ಲೆ.
ಸಿವಿಲ್ ಪೊಲೀಸ್‍ ನೇಮಕಾತಿ ಲಿಖಿತ ಪರೀಕ್ಷೆ:
ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದಿನಾಂಕ 20/09/2020ರಂದು ಜಿಲ್ಲೆಯ ಮಡಿಕೇರಿಯ 8 ಮತ್ತು ಕುಶಾಲನಗರದ 4 ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಯಿತು. ಜಿಲ್ಲೆಯಲ್ಲಿನ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಾಗಿ ಒಟ್ಟು 2756 ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಿರುತ್ತಾರೆ.
CRIME NEWS

ಹಲ್ಲೆ ಪ್ರಕರಣ

ದಿನಾಂಕ: 18-09-2020 ರಂದು ರಾತ್ರಿ ಸೋಮವಾರಪೇಟೆ ತಾಲ್ಲೂಕು ಅಬ್ಬೂರುಕಟ್ಟೆ ನಿವಾಸಿ ವಿಜಯ್‍ ವೇಗಸ್‍ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಮಹೇಶ್‍ @ ಗೋವರ್ಧನ್‍ ಎಂಬುವವರು ವೈಯಕ್ತಿಕ ವಿಚಾರದಲ್ಲಿ ವೈಷಮ್ಯದಿಂದ ದಾರಿ ತಡೆದು ಕೊಲೆಮಾಡುವ ಉದ್ದೇಶದಿಂದ ರಾಡಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 19-09-2020 ರಂದು ಸೋಮವಾರಪೇಟೆ ತಾಲ್ಲೂಕು ಮೆಣಸ ಗ್ರಾಮದ ನಿವಾಸಿ ಚೇತನ್‍ ಎಂಬುವವರಿಗೆ ಸಂದೀಪ, ಮಹೇಶ್‍ ಮತ್ತು ಕಾರ್ತಿಕ್‍ ಎಂಬುವವರು ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬೈಕ್‍ ಡಿಕ್ಕಿ, ಸವಾರ ಸಾವು.

ದಿನಾಂಕ: 19-09-2020 ರಂದು ಸೋಮವಾರಪೇಟೆ ತಾಲ್ಲೂಕು ಯಡವನಾಡು ಗ್ರಾಮದ ಬಳಿ ಮುಖ‍್ಯ ರಸ್ತೆಯಲ್ಲಿ ಕೆ-09-ಹೆಚ್‍ಎಂ-6327 ರ ಬೈಕನ್ನು ಅದರ ಸವಾರ ಯಶಸ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರೂ ಸವಾರರು ಗಾಯಗೊಂಡವರನ್ನು ಕೂಡಲೇ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು. ತಲೆಗೆ ಗಂಭೀರ ಗಾಯವಾಗಿದ್ದು ಹಿಂಬದಿ ಸವಾರ ಮನೋಜ್ ಎಂಬುವವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆ ಕಳವು ಯತ್ನ ಪ್ರಕರಣ

ದಿನಾಂಕ: 19-09-2020 ರಂದು ಬೆಳಿಗ್ಗೆ ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರ ವಸತಿ ಗೃಹದ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಒಡೆದು ಒಳನುಗ್ಗಿ ಮನೆಯೊಳಗಿದ್ದ ಬೀರುವಿನ ಬಾಗಿಲನ್ನು ತೆರೆದು ಕಳ್ಳತನ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 19-09-2020 ರಂದು ಮಡಿಕೇರಿ ತಾಲ್ಲೂಕು ಮರಗೋಡು ಗ್ರಾಮದ ಸೇತುವೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಯುವಕರು ಅಕ್ರಮವಾಗಿ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.