News

ಜಿಲ್ಲೆಯ ವಿವದೆಡೆ ಶಾಂತಿ ಸಭೆಗಳು

ಮುಂಬರುವ ಈದ್ ಮಿಲಾದ್‌ ಹಬ್ಬದಾಚರಣೆ, ಟಿಪ್ಪು ಜಯಂತಿ ಮತ್ತು ಅಯೋದ್ಯೆ ವಿವಾದದ ಸಂಬಂಧ ಸರ್ವೋಚ್ಚ ನ್ಯಾಯಾಲಯದ ಸಂಭವನೀಯ ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಜಿಲ್ಲಾ ಪೊಲೀಸ್‌ ಹಾಗೂ ಜಿಲ್ಲಾಡಳಿತದ ಪರವಾಗಿ ಜಿಲ್ಲೆಯ ವಿವದೆಡೆಗಳಲ್ಲಿ ಸಾರ್ವಜನಿಕರನ್ನೊಳಗೊಂಡಂತೆ ಶಾಂತಿ ಸಭೆಯನ್ನು ನಡೆಸಲಾಯಿತು.

ದಿನಾಂಕ 06/11/2019ರಂದು ಜಿಲ್ಲಾಧಿಕಾರಿಗಳಾದ ಶ್ರೀಮತಿ ಅನೀಸ್‌ ಕಣ್ಮಣಿ ಜಾಯ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್‌ರವರು ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಕೋಮಿನ ಪ್ರಮುಖರನ್ನೊಳಗೊಂಡಂತೆ ಜಿಲ್ಲಾ ಮಟ್ಟದ ಶಾಂತಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ಈದ್‌ ಮಿಲಾದ್, ಟಿಪ್ಪು ಜಯಂತಿ ಮತ್ತು ಅಯೋಧ್ಯೆ ವಿವಾದದ ತೀರ್ಪಿನ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದರು.

ಇದೇ ರೀತಿ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಆಯಾ ಠಾಣಾಧಿಕಾರಿಗಳು ವ್ಯಾಫ್ತಿಯ ವಿವಿಧ ಸ್ಥಳಗಳಲ್ಲಿ ಪ್ರಮುಖ ನಾಗರಿಕರನ್ನು ಒಳಗೊಂಡು ಶಾಂತಿ ಸಭೆಯನ್ನು ನಡೆಸಿದರು.

ಹಲ್ಲೆ ಪ್ರಕರಣ

ದಿನಾಂಕ 05/11/2019ರ ರಾತ್ರಿ ವೇಳೆ ಮಡಿಕೇರಿ ನಗರದ ಜಿ.ಟಿ. ರಸ್ತೆ ಬಳಿಯ ನಿವಾಸಿ ರಂಗಸ್ವಾಮಿ ಎಂಬವರು ಅವರ ಮನೆಯಲ್ಲಿರುವಾಗ ಅಲ್ಲಿಗೆ ಬಂದ ಮೇದರ ಚಿಣ್ಣಪ್ಪ ಎಂಬ ವ್ಯಕ್ತಿಯು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ರಂಗಸ್ವಾಮಿರವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 05/11/2019ರಂದು ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿ ನಿವಾಸಿ ರಾಮನ್ ಎಂಬವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ರಾಮನ್‌ರವರಿಗೆ ವಿಪರೀತ ಮದ್ಯಪಾನದ ಚಟವಿದ್ದು  ರಾಮನ್‌ರವರ ತಾಯಿ ಇತ್ತೀಚೆಗೆ ಮೃತರಾದ ಬಗ್ಗೆ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 05/11/2019ರಂದು ಶನಿವಾರಸಂತೆ ಬಳಿಯ ಮುಳ್ಳೂರು ನಿವಾಸಿ ಕಿರಣ್‌ ಎಂಬವರನ್ನು ಹೊನ್ನೇಕೊಪ್ಪಲು ನಿವಾಸಿ ರಂಗಸ್ವಾಮಿ ಎಂಬವರು ಕರೆದುಕೊಂಡು ಸ್ಕೂಟರಿನಲ್ಲಿ ಕರೆದುಕೊಂಡು ಶನಿವಾರಸಂತೆ ನಗರಕ್ಕೆ ಹೋಗಿ ಮರಳಿ ಬರುವಾಗ ಗೋಪಾಲಪುರ ಬಳಿ ಸ್ಕೂಟರನ್ನು ನಿಲ್ಲಿಸಿ ಕ್ಷುಲ್ಲಕ ಕಾರಣಕ್ಕೆ ಬಿಯರ್ ಬಾಟಲಿಯಿಂದ ಕಿರಣ್‌ ಕುಮಾರ್‌ರವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಶವ ಪತ್ತೆ

ದಿನಾಂಕ 06/11/2019ರಂದು ಕುಶಾಲನಗರ ಬಳಿಯ ಗುಮ್ಮನಕೊಲ್ಲಿ ನಿವಾಸಿ ಗಣೇಶ ಎಂಬವರು ಗುಮ್ಮನಕೊಲ್ಲಿಯ ಬಳಿ ಕಾವೇರಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಕಾವೇರಿ ನದಿಯಲ್ಲಿ ಒಂದು ಅಪರಿಚಿತ ಗಂಡಸಿನ ಶವವು ಕೊಳೆತ ಸ್ಥಿತಿಯಲ್ಲಿ ತೇಲುತ್ತಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜೆಸಿಬಿ ಯಂತ್ರ ಅವಘಢ

ದಿನಾಂಕ 05/11/2019ರಂದು ಕುಶಾಲನಗರದ ನಿವಾಸಿ ಶ್ರೀನಿವಾಸ್‌ ಎಂಬವರು ಅವರ ಜೆಸಿಬಿ ಯಂತ್ರದಲ್ಲಿ ಹೆಬ್ಬಾಲೆಯ ಸೂಳೆಕೋಟೆ ರಸ್ತೆಯಲ್ಲಿರುವ ಸೇತುವೆಯ ಬಳಿ ಸೋಮಣ್ಣ ಎಂಬವರ ಜಮೀನಿನಲ್ಲಿ ರಸ್ತೆ ಕೆಲಸ ಮಾಡಿಸುತ್ತಿರುವಾಗ ಜೆಸಿಬಿ ಚಾಲಕ ಧನರಾಜ್‌ರವರು ನಿರ್ಲಕ್ಷ್ಯತನದಿಂದ ಜೆಸಿಬಿ ಯಂತ್ರವು ಇಳಿಜಾರಿನಲ್ಲಿ ಜಾರಿ ಬಿದ್ದು ಹಾನಿಗೊಳಗಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 06/11/2019ರಂದು ಹುಣಸೂರು ಬಳಿಯ ಹುಣಸೇಗಾಲ ನಿವಾಸಿ ವಿಕ್ರಂ ಎಂಬವರು ಅವರ ಬೈಕಿನಲ್ಲಿ ಗೋಣಿಕೊಪ್ಪದಿಂದ ಹುಣಸೂರಿಗೆ ಹೋಗುತ್ತಿರುವಾಗ ಗೋಣಿಕೊಪ್ಪ ನಗರದ ಮುಖ್ಯ ರಸ್ತೆಯಲ್ಲಿ ಕೆಎ-12-ಪಿ-3189 ಸಂಖ್ಯೆ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವಿಕ್ರಂರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ವಿಕ್ರಂರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ, ಕೊಲೆ ಯತ್ನ

ದಿನಾಂಕ 06/11/2019ರಂದು ವಿರಾಜಪೇಟೆ ಬಳಿಯ ಮಕ್ಕಿ ರಾಮನಗರ ನಿವಾಸಿ ಪಣಿ ಎರವರ ಭೋಜ ಎಂಬವರೊಡನೆ ಮಲೆಯಾಳಿ ಮನೋಜ್‌ ಎಂಬಾತನು ಹಳೆ ವೈಷಮ್ಯದಿಂದ ಜಗಳವಾಡಿ ದಬ್ಬೆ ಕತ್ತಿಯಿಂದ ಭೋಜರವರ ಮೇಲೆ ಕಡಿದು ಕಲೆ ಯತ್ನ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.