Police News

ಕೊಡಗು ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾ ಕೂಟ

ಕೊಡಗು ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನೆಯು ಮಡಿಕೇರಿ ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಅಂತರ ರಾಷ್ಟ್ರೀಯ ಹಾಕಿ ಆಟಗಾರ ಎಸ್‌.ವಿ. ಸುನಿಲ್ ಆಚಾರ್ಯ ಪಾಲ್ಗೊಂಡು ಕ್ರೀಡಾ ಕೂಟವನ್ನು ಉದ್ಘಾಟಿಸಿದರು.

ದಿನಾಂಕ 18/12/2019 ರಿಂದ ಮೂರು ದಿನಗಳ ಕಾಲ ನಡೆಯುವ ಪೊಲೀಸ್‌ ವಾರ್ಷಿಕ ಕ್ರೀಡಾ ಕೂಟದಲ್ಲಿ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆ ಮತ್ತು ಕಚೇರಿಗಳು ಮತ್ತು ಇತರೆ ಘಟಕಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದು ದಿನಾಂಕ 20/12/2019ರ ರಂದು ಸಮಾರೋಪ ಸಮಾರಂಭ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್ ಮತ್ತು ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 12/12/2019ರಂದು ಕುಶಾಲನಗರ ಬಳಿಯ ನಂಜರಾಯಪಟ್ನದ ನಿವಾಸಿ ಬಿ.ಸಿ.ಪ್ರವೀಣ ಎಂಬವರು ಅವರ ನೆಂಟರ ಮನೆಯಾದ ಪೊನ್ನಂಪೇಟೆ ಬಳಿಯ ಹುದೂರು ಗ್ರಾಮದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 17/12/2019ರಂದು  ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 16/12/2019ರಂದು ಕುಟ್ಟ ಬಳಿಯ ನಾಲ್ಕೇರಿ ನಿವಾಸಿ ಶ್ರೀಧರ ಎಂಬವರು ಅತೀವ ಮದ್ಯಪಾನ ಮಾಡಿ ಮನೆಗೆ ಬಂದು ಮನೆಯಲ್ಲಿ ಮಲಗಿಕೊಂಡಿದ್ದು ನಿತ್ರಾಣಗೊಂಡು ಮಲಗಿದ್ದಲ್ಲೇ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್ ಅಪಘಾತ, ಸಾವು

ದಿನಾಂಕ 16/12/2019ರ ಸಂಜೆ ವೇಳೆ ಮಡಿಕೇರಿ ಬಳಿಯ ಮಕ್ಕಂದೂರಿನ ಹೆಮ್ಮೆತ್ತಾಳು ನಿವಾಸಿ ಯೋಗಾನಂದ ಎಂಬವರು ಸ್ಕೂಟರಿನಲ್ಲಿ ಮನೆಯಿಂದ ಮಕ್ಕಂದೂರಿಗೆ ಹೋಗುವಾಗ ಮನೆಯ ಬಳಿ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಬಿದ್ದ ಪರಿಣಾಮ ಯೋಗಾನಂದರವರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 17/12/2019ರಂದು ಸಂಪಾಜೆ ಬಳಿಯ ಎಂ. ಚೆಂಬು ಬಳಿಯ ಕುದ್ರೆಪ್ಪಾಯ ನಿವಾಸಿ ಭೋಜಪ್ಪ ಎಂಬವರು ಮನೆಯ ಹತ್ತಿರವಿದ್ದಾಗ ಅಲ್ಲಿಗೆ ಬಂದ ಅವರ ಚಿಕ್ಕಪ್ಪ ಮಾಧವ ಎಂಬವರು ರಸ್ತೆ ವಿಚಾರವಾಗಿ ಜಗಳವಾಡಿ ಕತ್ತಿಯಿಂದ ಬೋಜಪ್ಪರವರ ಕೈಗೆ ಕಡಿದು ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಗಾಂಜಾ ಬೆಳೆ ಪ್ರಕರಣ

ಸುಂಟಿಕೊಪ್ಪ ಬಳಿಯ ಗರಗಂದೂರು ಬಳಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವುದಾಗಿ ದೊರೆತ ಸುಳಿವಿನ ಮೇರೆಗೆ ಸುಂಟಿಕೊಪ್ಪ ಠಾಣೆಯ ಎಎಸ್‌ಐ ಕೆ.ಒ.ರಮೇಶ್‌ರವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಗರಗಂದೂರಿನ ಎ.ಪಿ.ಶಂಕರಪ್ಪ ಎಂಬವರ ಕಾಫಿ ತೋಟದಲ್ಲಿ ಶಂಕರಪ್ಪನವರು ಮತ್ತು ತೋಟದ ಮೇಸ್ತ್ರಿ ಉಣ್ಣಿ ಕೃಷ್ಣ ಎಂಬವರು ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದು ಪತ್ತೆಯಾಗಿದ್ದು ಆರೋಪಿಗಳನ್ನು ಬಂಧಿಸಿ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.